ಮಾಚ್ವೆ, ಪ್ರಭಾಕರ್ (ಬಲವಂತ್)
1917 ಹಿಂದಿ ಕವಿ. ಹುಟ್ಟಿದ್ದು ಮಧ್ಯಪ್ರದೇಶದ ಗ್ವಾಲಿಯರ್‍ನಲ್ಲಿ. ರತ್ಲಾಮ್ ಹೈಸ್ಕೂಲು. ಇಂದೂರ್ ಕ್ರಿಶ್ಚಿಯನ್ ಕಾಲೇಜು, ಆಗ್ರಾ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆದ ಇವರು ಸಾಹಿತ್ಯ ರತ್ನ (1936). ಎಂ.ಎ. ತತ್ತ್ವಶಾಸ್ತ್ರ (1937), ಎಂ.ಎ.ಇಂಗ್ಲಿಷ್ (1943) ಪದವಿಗಳನ್ನು ಹಿಂದಿಯಲ್ಲಿ (1958) ಡಾಕ್ಟೊರೇಟ್ ಪದವಿಯನ್ನೂ ಪಡೆದಿದ್ದಾರೆ.
1937ರಲ್ಲಿ ಇಂದೂರ್ ರಾಷ್ಟ್ರೀಯ ಮಜದೂರ್ ಸಂಘದ ಕಾರ್ಯದರ್ಶಿಯಾಗಿದ್ದರು. ಉಜ್ಜಯಿನಿಯ ಮಾಧವ್ ಕಾಲೇಜಿನಲ್ಲಿ 1937-48 ಅವಧಿಯಲ್ಲಿ ಹನ್ನೊಂದು ವರ್ಷ ತತ್ತ್ವಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. ನಾಗಪುರ, ಅಲಹಾಬಾದ್, ದಿಲ್ಲಿ ಆಕಾಶವಾಣಿ ಕೇಂದ್ರಗಳಲ್ಲಿ 1948-54 ಅವಧಿಯಲ್ಲಿ ಕೆಲಸ ಮಾಡಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಆರಂಭದಿಂದಲೂ ಅದರ ಪ್ರಥಮ ಸಹಾಯಕ ಕಾರ್ಯದರ್ಶಿಯಾಗಿ 1954 ರಿಂದ 1971ರ ತನಕ ದುಡಿದು ಮುಂದೆ 1975ರಲ್ಲಿ ಕಾರ್ಯದರ್ಶಿಯಾಗಿ ನಿವೃತ್ತರಾದರು. ಈ ಮಧ್ಯೆ ಅಮೆರಿಕೆಯ ವಿಸ್ಕಾನ್ಸಿನ್ ಮತ್ತು ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ 1959 ರಿಂದ 1961ರ ತನಕ ಇದ್ದು ಬಂದರು. 1964-66ರಲ್ಲಿ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮೀಷನ್‍ನಲ್ಲಿ ವಿಶೇಷ ಭಾಷಾ ಅಧಿಕಾರಿಯಾಗಿದ್ದರು. 1959-77ರಲ್ಲಿ ಸಿಮ್ಲಾದ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್‍ನ ಸಂದರ್ಶಕ ಫೆಲೊ ಆಗಿದ್ದರು. 1978ರಲ್ಲಿ ಆಗ್ರಾ ವಿಶ್ವವಿದ್ಯಾಲಯದ ಕೆ.ಎಂ. ಹಿಂದೀ ಇನ್‍ಸ್ಟಿಟ್ಯೂಟ್‍ನಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು.

1940ರಲ್ಲಿ ಗಾಂಧೀಜಿಯ ಸಮ್ಮುಖದಲ್ಲಿ ಸೇವಾಗ್ರಾಮದಲ್ಲಿ ವಿವಾಹವಾದ ಇವರು ಭಾರತದ ಅನೇಕ ಹಿರಿಯ ದೇಶಭಕ್ತರನ್ನೂ ಸಾಹಿತಿ-ಕಲಾವಿದರನ್ನೂ ಪ್ರತ್ಯಕ್ಷವಾಗಿ ಬಲ್ಲರು. ಪ್ರವಾಸ, ಭಾಷಾಕಲಿಕೆ ಹಾಗೂ ಚಿತ್ರಕಲೆಯನ್ನು ಬಲುವಾಗಿ ಮೆಚ್ಚಾದ ಇವರು ಅನೇಕ ವಿಷಯಗಳಲ್ಲಿ ಚಲಿಸುವ ಕೋಶವಾಗಿದ್ದಾರೆ.

ಹಿಂದೀ, ಮರಾಠೀ, ಇಂಗ್ಲಿಷ್ ಭಾಷೆಗಳಲ್ಲಿ ಸುಮಾರು ಅರುವತ್ತಕ್ಕೂ ಮಿಕ್ಕಿದ ಕೃತಿಗಳನ್ನು ರಚಿಸಿದ್ದಾರೆ. 1943ರಲ್ಲಿ ಆಜ್ಞೇಯರು ಸಂಪಾದಿಸಿದ ತಾರಸಪ್ತಕ್‍ದಲ್ಲಿ ಕವಿಯಾಗಿ ಕಾಣಿಸಿಕೊಂಡ ಇವರು ಮುಂದೆ ಸ್ವಪ್ನ ಭಂಗ್ (1957), ಅನುಕ್ಷಣ್ (1959) ಮುಂತಾದ ಕವನ ಸಂಗ್ರಹಗಳನ್ನು ಪ್ರಕಟಿಸಿದ್ದಾರೆ. ಪರಂತು (1951), ಏಕ್ ತಾರಾ (1952), ದ್ವಾಭಾ (1955), ಸಾಂಚಾ (1956), ಲಕ್ಷ್ಮೀಬೇನ್ (1977), 30-40-50 ಮುಂತಾದ 11 ಕಾದಂಬರಿಗಳು; ಸಂಗೀನೋ ಕಾ ಸಾಯಾ (1943) ಎಂಬ ಕಥಾ ಸಂಗ್ರಹ; ಖರಗೋಶ್ ಕೇ ಸೀಂಗ್ (1950), ಬೇರಂಗ್ (1055) ಎಂಬ ಲಲಿತ ಪ್ರಬಂಧ ಸಂಗ್ರಹಗಳು; ಶಿವಾಜಿಯ ಬಗ್ಗೆ ಒಂದು ಜೀವನ ಚರಿತ್ರೆ; ವ್ಯಕ್ತಿ ಔರ್ ವಾಙ್ಮಯ್ (1952), ಸಮೀಕ್ಷ ಕೀ ಸಮೀಕ್ಷ (1953); ಸಂತುಲನ್ (1954), ಹಿಂದೀ ನಿಬಂಧ್ (1955), ಮರಾಠೀ ಔರ್ ಉಸ್‍ಕಾ ಸಾಹಿತ್ಯ (1956); ನಾಟ್ಯ ಚರ್ಚಾ (1957), ಹಿಂದೀ ಸಾಹಿತ್ಯ ಕೀ ಕಹಾನೀ (1957) ಭಾರತ್ ಔರ್ ಏಷಿಯಾ ಕೇ ಸಾಹಿತ್ಯ ಮುಂತಾದ ವಿಮರ್ಶಾತ್ಮಕ ಗ್ರಂಥಗಳು; ಹಿಂದೀ ಮರಾಠೀ ನಿರ್ಗುಣ್ ಸಂತ ಕಾವ್ಯ (1959) ಎಂಬ ಸಂಶೊಧನ ಗ್ರಂಥ; ಎರಡು ಪ್ರವಾಸ ಕಥನಗಳು; ಅಸ್ತಿತ್ವವಾದ್, ವಿಭಿನ್ನ ಧರ್ಮೋ ಮೇ ಈಶ್ವರ್ ಕಲ್ಪನಾ ಎಂಬ ತತ್ತ್ವಶಾಸ್ತ್ರ ಗ್ರಂಥಗಳು; ಪಢಿಯೇ ಪಂದ್ರಹ್ ಭಾಷಾಯೇ ಎಂಬ ಭಾಷಾವಿಷಯಕ ಗ್ರಂಥ ಹಾಗೂ ವಿವಿಧ ಸಾಹಿತಿಗಳೊಂದಿಗೆ ಸಂಪಾದಿಸಿದ ಹಲವಾರು ಶಬ್ದಕೋಶಗಳು, ಅಭಿನಂದನ ಗ್ರಂಥಗಳು ಮತ್ತು ಇಂಗ್ಲಿಷ್, ಮರಾಠಿಯಿಂದ ಮಾಡಿದ ಅನುವಾದಗಳು ಹಾಗೂ ಇತರ ಭಾಷೆಗೆ ಅನುವಾದಗೊಂಡ ತಮ್ಮ ಕೃತಿಗಳ ಅನುವಾದಗಳು ಮಾಚ್‍ವೆ ಅವರ ಹೆಸರನ್ನು ಶಾಶ್ವತವಾಗಿಸಿವೆ.

ಮರಾಠಿಯಲ್ಲಿ ಜಗಜೀವನರಾಮರನ್ನು ಕುರಿತು ಒಂದು ಪುಸ್ತಕವನ್ನೂ ಇಂಗ್ಲಿಷಿನಲ್ಲಿ ಕಬೀರ್, ನಾಮದೇವ್, ಕೇಶವಸುತ್, ತುಕಾರಾಮ್ ಪೊಯಮ್ಸ್, ಫೋರ್ ಡಿಕೀಡ್ಸ್ ಆಫ್ ಇಂಡಿಯನ್ ಲಿಟೆರೇಚರ್, ಕ್ರಿಯೇಟಿವ್ ಆರ್ಟ್ ಅಂಡ್ ಕಮ್ಯುನಿಕೇಶನ್, ಈಸ್ಟ್ ವರ್ಸಸ್ ವೆಸ್ಟ್ ಅಲ್ಲದೆ ಫ್ರಮ್ ಸೆಲ್ಫ್ ಟು ಸೆಲ್ಫ (1977) ಎಂಬ ಆತ್ಮಕಥೆಯನ್ನೂ ಬರೆದಿದ್ದಾರೆ. ಅಕ್ಷರ್-ಅರ್ಪಣ್ ಎಂಬ ಷಷ್ಟ್ಯಬ್ದಿ ಗ್ರಂಥ (ಹಿಂದಿ) ಮಾಚ್‍ವೆ ಅವರನ್ನು ಕುರಿತ ಗ್ರಂಥವಾಗಿವೆ.	
	 (ಎಸ್‍ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ